ಸಿನಿಮಾ ಸಂಕಷ್ಟಕ್ಕೆ ‘ತೆರೆ’? : ಇಂದು ಶೇ.50-50 ರೂಲ್ಸ್ ರದ್ದು ಸಾಧ್ಯತೆ!

ಕೊರೊನಾದಿಂದ ಬರಸಿಡಿಲು ಬಡಿದಂತಾಗಿದ್ದ ಸಿನಿಮಾ ಸಂಕಷ್ಟಕ್ಕೆ ಇಂದು ತೆರೆ ಬೀಳುವ ಸಾಧ್ಯತೆ ಇದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದರಿಂದ ಥಿಯೇಟರ್ ತೆರೆಯಲು ರಾಜ್ಯ ಸರ್ಕಾರ ಅವಕಾಶ ನೀಡುವ ಸಾಧ್ಯತೆ ಇದೆ.

ಕೊರೊನಾ ಕಾರಣದಿಂದ ಜಾರಿಯಾಗಿದ್ದ ಶೇ.50-50 ರೂಲ್ಸಗೆ ಇಂದು ರಾಜ್ಯ ಸರ್ಕಾರ ಅಂತ್ಯ ಹಾಡಲಿದೆ. ಈ ಬಗ್ಗೆ ಇಂದು ಉನ್ನತಮಟ್ಟದ ಸಭೆ ನಡೆಯಲಿದ್ದು ಚರ್ಚೆ ಬಳಿಕ ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಜನ ಸಿನಿಮಾ ವೀಕ್ಷಣೆಗೆ ಅವಕಾಶ ನೀಡಲು ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.

ಈ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ ಸುಧಾಕರ್, “ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ, ಚಿತ್ರೋದ್ಯೋಮಕ್ಕೆ ಪೂರ್ಣ ಅನುಮತಿ ನೀಡುವ ಬಗ್ಗೆ ಇಂದು ಚರ್ಚೆ ಮಾಡಲಾಗುತ್ತದೆ. ಸರ್ಕಾರ ಒಂದು ವೇಳೆ ಶೇ.100ರಷ್ಟು ಜನರಿಗೆ ಸಿನಿಮಾ ವೀಕ್ಷಣೆಗೆ ಅನುಮತಿ ನೀಡದರೆ ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಷರತ್ತು ಬದ್ಧ ಅನುಮತಿ ನೀಡಬಹುದು. ಈ ಬಗ್ಗೆ ಸರ್ಕಾರ ಬಿಬಿಎಂಪಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತದೆ” ಎಂದರು.

ನಿನ್ನೆಯಷ್ಟೇ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡುವಂತೆ ನಿರ್ಮಾಪಕರಾದ ಸೂರಪ್ಪ ಬಾಬು, ಜಯಣ್ಣ ಮತ್ತಿತರರು ಸರ್ಕಾರಕ್ಕೆ ಮನವಿ ಮಾಡಿದ್ದರು. ಮನವಿಯನ್ನು ಸ್ವೀಕರಿಸಲಾಗಿದ್ದು ಇಂದು ಸಿನಿಮಾ ಪ್ರಿಯರಿಗೆ ಗುಡ್ ನ್ಯೂಸ್ ಸಿಗಲಿದೆ ಎನ್ನಲಾಗುತ್ತಿದೆ.

ಒಂದು ವೇಳೆ ಸರ್ಕಾರ ಶೇ.100ರಷ್ಟು ಜನರಿಗೆ ಸಿನಿಮಾ ವೀಕ್ಷಣೆಗೆ ಷರತ್ತುಬದ್ಧ ಅನುಮತಿ ನೀಡಿದರೆ, 5 ವರ್ಷದ ಮಕ್ಕಳಿಗೆ ವಯಸ್ಕರಿಗೆ ಪ್ರವೇಶ ನಿರ್ಬಂಧಿಸುವ ಮತ್ತು ಎಲ್ಲರೂ ಮಾಸ್ಕ್ ಕಡ್ಡಾಯವಾಗಿ ಧರಿಸುವ ಜೊತೆಗೆ ಬ್ರೇಕ್ ಅಧಿಕಗೊಳಿಸುವ ಇಂತೆಲ್ಲ ಷರತ್ತುಗಳನ್ನು ವಿಧಿಸುವ ಸಾಧ್ಯತೆ ಇದೆ.

ಈಗಾಗಲೇ ಬಿಗ್ ಸಿನಿಮಾಗಳು ಶೋಗೆ ರೆಡಿ ಆಗಿದ್ದು ಶಿವರಾಜಕುಮಾರ್ ಅಭಿನಯದ ಭಜರಂಗಿ 2, ದುನಿಯಾ ವಿಜಯ್ ಅಭಿನಯದ ಸಲಗ, ಕಿಚ್ಚ ಸುದೀಪ ಅಭಿನಯದ ಕೋಟಿಗೊಬ್ಬ 3 ಸಿನಿಮಾಗಳು ರಿಲೀಸ್ ಆಗಲು ಸಿದ್ದವಾಗಿವೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights