ಒಂದೂವರೆ ವರ್ಷ ಕೃಷಿ ಕಾಯ್ದೆಗಳ ತಡೆ: ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಿದ ರೈತರು!

ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾಯ್ದೆಗಳನ್ನು ಒಂದೂವರೆ ವರ್ಷಗಳ ಕಾಲ ತಡೆಹಿಡಿಯುತ್ತೇವೆ ಎಂಬ ಸರ್ಕಾರದ ಪ್ರಸ್ತಾಪವನ್ನು ರೈತರು ತಿಸ್ತರಿಸಿದ್ದಾರೆ.

ಹೋರಾಟನಿರತ ರೈತರು ಮತ್ತು ಸರ್ಕಾರದ ನಡುವೆ ಜನವರಿ 20 ರಂದು ನಡೆದ 10ನೇ ಸುತ್ತಿನ ಮಾತುಕತೆಯಲ್ಲಿ ಕೇಂದ್ರ ಸರ್ಕಾರ ಕಾಯ್ದೆಗಳನ್ನು ಒಂದೂವರೆ ವರ್ಷಗಳ ಕಾಲ ಸ್ಥಗಿತಗೊಳಿಸುವುದಾಗಿ ಹೇಳಿತ್ತು. ಈ ಬಗ್ಗೆ ನಿನ್ನೆ (ಜ 21) ರಂದು ಪ್ರತಿಭಟನಾ ಸ್ಥಳದಲ್ಲಿ ಸಭೆ ನಡೆಸಿದ ರೈತರು ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಿದ್ದೇವೆ ಎಂದು ಹೇಳಿದ್ದಾರೆ.

“ಕೃಷಿ ಕಾನೂನುಗಳನ್ನು ರದ್ದುಗೊಳಿಸಿ, ಕನಿಷ್ಟ ಬೆಂಬಲ ಬೆಲೆಯ ಭರವಸೆ ನೀಡಬೇಕು. ಇಲ್ಲದಿದ್ದರೆ ನಮ್ಮ ಹೋರಾಟವನ್ನು ಹಿಂತೆಗೆದುಕೊಳ್ಳುವುದಿಲ್ಲ” ಎಂದು ರೈತ ಮುಖಂಡರು ಹೇಳಿದ್ದಾರೆ.

“ಅದಾಗ್ಯೂ ಗಣರಾಜ್ಯೋತ್ಸವದಂದು ನಡೆಯಲಿರುವ ಟ್ರ್ಯಾಕ್ಟರ್ ರ್ಯಾಲಿಯನ್ನು ನಡೆಸಿಯೇ ತೀರುತ್ತೇವೆ. ಇದರಿಂದ ಸರ್ಕಾರದ ಯಾವುದೇ ಕಾರ್ಯಕ್ರಮಗಳಿಗೆ ತೊಂದರೆಯಾಗುವುದಿಲ್ಲ” ಎಂದೂ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಹೋರಾಟ ಮಾಡುತ್ತಿರುವ ರೈತರೊಡನೆ ಕೇಂದ್ರ ಸರ್ಕಾರ 10 ನೇ ಸುತ್ತಿನ ಮಾತುಕತೆ ನಡೆಸಿದ್ದು, “ಕೃಷಿ ಕಾಯ್ದೆಗಳ ಅನುಷ್ಠಾನವನ್ನು ಒಂದೂವರೆ ವರ್ಷ ತಡೆಹಿಡಿಯಲಾಗುವುದು” ಎಂದು ಹೇಳಿತ್ತು.

ಈ ಕುರಿತು ಅಖಿಲ ಭಾರತ ಕಿಸಾನ್ ಸಭಾ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲಾ, “ಒಂದೂವರೆ ವರ್ಷದವರೆಗೆ ಕಾನೂನುಗಳ ಅನುಷ್ಠಾನವನ್ನು ಸ್ಥಗಿತಗೊಳಿಸಲಾಗುವುದು ಎಂದು ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಲು ಕೇಂದ್ರ ಸರ್ಕಾರ ಸಿದ್ಧವಾಗಿರುವುದಾಗಿ ಹೇಳಿದೆ” ಎಂದು ಹೇಳಿದ್ದರು.

“ಕನಿಷ್ಟ ಬೆಂಬಲ ಬೆಲೆ ಮತ್ತು ಕೃಷಿ ಕಾನೂನುಗಳ ಬಗ್ಗೆ ಸಮಿತಿಯನ್ನು ರಚಿಸಲಾಗುವುದು. ಜೊತೆಗೆ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ನಾವು ನಾಳೆ ಸಭೆ ನಡೆಸಿ, ಈ ಪ್ರಸ್ತಾಪದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ಹನ್ನನ್ ಮೊಲ್ಲಾ ಹೇಳಿದ್ದರು.

ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ಕಳೆದ ಎರಡು ತಿಂಗಳಿನಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಬಿಕ್ಕಟ್ಟಿನ ಕುರಿತು ಕೇಂದ್ರ ಸರ್ಕಾರ ಮತ್ತು ರೈತರ ನಡುವೆ 10 ಸುತ್ತಿನ ಮಾತುಕತೆಗಳು ನಡೆದಿದ್ದು, ಎಲ್ಲವೂ ವಿಫಲವಾಗಿವೆ. ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೆಕು ಎಂದು ರೈತರು ಒತ್ತಾಯಿಸುತ್ತಿದ್ದರೆ, ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುತ್ತಿಲ್ಲ.

ಇದನ್ನೂ ಓದಿ: ರೈತ ಹೋರಾಟ; ಕೃಷಿ ಕಾಯ್ದೆಗಳ ವಿರುದ್ಧ ಪೆರುವಿನ ರೈತರಿಗೆ ಗೆಲವು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights