ಮೋದಿ ಭೇಟಿ ಮಾಡಿದ ಜಗನ್‌ ರೆಡ್ಡಿ: ಬಿಜೆಪಿ ಜೊತೆ ಮೈತ್ರಿಗೆ ಮುಂದಾಗಿದ್ಯಾ YSR ಕಾಂಗ್ರೆಸ್‌!

ದೆಹಲಿಗೆ ತೆರಳಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ್ದ ಜಗನ್‌, ಈಗ ಮೋದಿಯವರನ್ನು ಭೇಟಿಮಾಡಿದ್ದು, ಇದು ವೈಎಸ್ಆರ್ ಕಾಂಗ್ರೆಸ್ ಪಕ್ಷವು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್‌ಡಿಎ) ಸೇರಬಹುದು ಎಂಬ ಊಹಾಪೋಹಗಳಿಗೆ ಮತ್ತೊಮ್ಮೆ ಕಾರಣವಾಗಿದೆ.

ಜಗನ್‌ ಮೋಹನ ರೆಡ್ಡಿ ವಿರುದ್ಧ ಇರುವ ಸಿಬಿಐ ಪ್ರಕರಣಗಳಿಂದ ತಪ್ಪಿಸಿಕೊಳ್ಳಲು, ಈಸಿಯಾಗಿ ಪ್ರಕರಣಗಳನ್ನು ಗೆಲ್ಲಲು ಬಿಜೆಪಿ ಸಖ್ಯ ಮಾಡಲು ವೈಎಸ್‌ಆರ್‌ ಕಾಂಗ್ರೆಸ್‌ ಮುಂದಾಗಿದೆ ಎಂದು ಆಂಧ್ರಪ್ರದೇಶದ ವಿರೋಧ ಪಕ್ಷ ತೆಗುಲು ದೇಶಂನ ನಾಯಕ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.

ಶಿವಸೇನೆ ಮತ್ತು ಶಿರೋಮಣಿ ಅಕಾಲಿ ದಳ ಪಕ್ಷಗಳು ಎನ್‌ಡಿಎಯಿಂದ ಹೊರಬಂದ ನಂತರ ಬಿಜೆಪಿಯು ಎನ್‌ಡಿಎಗೆ ಮತ್ತಷ್ಟು ಪಕ್ಷಗಳ ಮೈತ್ರಿಯನ್ನು ಬಯಸಿದೆ. ಎನ್‌ಡಿಎ ಸೇರಿದರೆ, ರಾಜ್ಯಸಭೆ ಮತ್ತು ಕೇಂದ್ರ ಕ್ಯಾಬಿನೆಟ್‌ನಲ್ಲಿ ಸ್ಥಾನ ಸಿಗಬಹುದು ಎಂದು ವೈಎಸ್‌ಆರ್‌ ಕಾಂಗ್ರೆಸ್‌ ಚಿಂತಿಸಿದೆ ಎಂದು ಹೇಳಲಾಗುತ್ತಿದೆ.

ಜಗನ್ ಮೋಹನ್‌ ರೆಡ್ಡಿ ಅವರ ಪಕ್ಷವು ಎನ್‌ಡಿಎ ಜೊತೆ ಸೇರುತ್ತದೆ ಎಂಬ ಮಾತನ್ನು ವೈಎಸ್ಆರ್ ಕಾಂಗ್ರೆಸ್ ನಿರಾಕರಿಸಿದೆ.

ಕೊರೊನಾ ಸೋಂಕಿನಿಂದಾಗಿ ರಾಜ್ಯದ ಆರ್ಥಿಕತೆ ದುಸ್ಥಿತಿಯನ್ನು ಎದುರಿಸುತ್ತಿದೆ. ಹಾಗಾಗಿ ಕೇಂದ್ರದ ಸ್ನೇಹ ಹೊಂದುವುದು ರಾಜ್ಯಕ್ಕೆ ಅಗತ್ಯವಾಗಿದೆ. 2019ರ ಚುನಾವಣೆಯ ಸಂದರ್ಭದಲ್ಲಿ ಆಂಧ್ರಪ್ರದೇಶಕ್ಕೆ ವಿಶೇಷ ವರ್ಗದ ಸ್ಥಾನಮಾನ ಪಡೆಯದೇ ಎನ್‌ಡಿಎ ಸೇರುವುದಿಲ್ಲ ಎಂದು ಪೂರ್ವ ಷರತ್ತು ಹಾಕಲಾಗಿದೆ. ಆದರೆ, ವೈಎಸ್‌ಆರ್‌ ಕಾಂಗ್ರೆಸ್‌ ನೀಡಿದ್ದ ಪ್ರಮುಖ ಭರವಸೆಯಾಗಿದ್ದ ವಿಶೇಷ ಸ್ಥಾನಮಾನದ ಭರವಸೆಗೆ ಹಿನ್ನಡೆಯಾಗಿದೆ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಬಿಜೆಪಿ ಮತ್ತು ವೈಎಸ್ಆರ್ ಕಾಂಗ್ರೆಸ್ ಎರಡೂ ಪಕ್ಷಗಳ ಪ್ರಮುಖ ಕ್ಷೇತ್ರಗಳು ವಿಭಿನ್ನವಾಗಿವೆ. ಬಿಜೆಪಿ ‘ಮುಖ್ಯವಾಹಿನಿಯ ಹಿಂದೂ’ ಪಕ್ಷವಾಗಿದೆ ಮತ್ತು ವೈಎಸ್ಆರ್ ಕಾಂಗ್ರೆಸ್ ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡ, ಕ್ರಿಶ್ಚಿಯನ್ನರು ಮತ್ತು ಇತರ ಅಲ್ಪಸಂಖ್ಯಾತರಿಂದ ಬೆಂಬಲಿತ ಪಕ್ಷವಾಗಿದೆ.


ಇದನ್ನೂ ಓದಿ: Fact Check: ನನ್ನ ಕೆಲಸ ಹಸುಗಳನ್ನು ರಕ್ಷಿಸುವುದಷ್ಟೇ, ಮಹಿಳೆಯರನ್ನಲ್ಲ ಎಂದು ಯೋಗಿ ಆಧಿತ್ಯಾನಾಥ್‌ ಹೇಳಿದ್ದಾರೆಯೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights