ಬೆಡ್‌ ಬ್ಲಾಕಿಂಗ್ ದಂದೆ: BBMP ವಾರ್‌ ರೂಮ್‌ನ 17 ನೌಕರರೂ ಆರೋಪಮುಕ್ತ; ಆದರೂ ಉದ್ಯೋಗವಿಲ್ಲ!

ಬೆಂಗಳೂರಿನಲ್ಲಿ ಬೆಡ್‌ ಬ್ಲಾಕಿಂಗ್‌ ದಂದೆಯಲ್ಲಿ ಬಿಬಿಎಂಪಿ ದಕ್ಷಿಣ ವಲಯದ ವಾರ್‌ ರೂಂನ 17 ಮಂದಿ ನೌಕರರು ಭಾಗಿಯಾಗಿದ್ದಾರೆ ಎಂಬ ಆರೋಪ ಮೇಲೆ ಅವರನ್ನು ಅಮಾನತು ಮಾಡಲಾಗಿತ್ತು. ಆದರೆ, ಆ ಆರೋಪ ಸುಳ್ಳು ಎಂಬುದು ಪೊಲೀಸ್‌ ತನಿಖೆಯಲ್ಲಿ ತಿಳಿದು ಬಂದಿದ್ದು, 17 ಮಂದಿ ನೌಕಕರೂ ಆರೋಪ ಮುಕ್ತರಾಗಿದ್ದಾರೆ. ಆದರೂ, ಇನ್ನೂ ಅವರು ಉದ್ಯೋಗವಿಲ್ಲದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಕೆಲವು ದಿನಗಳ ಹಿಂದೆ ಪತ್ರಿಕಾಗೋಷ್ಟಿ ನಡೆಸಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಬಿಬಿಎಂಪಿ ವಾರ್‌ ರೂಮ್‌ನ 17 ಮಂದಿ ಮುಸ್ಲಿಂ ನೌಕರರು ಬೆಡ್‌ ಬ್ಲಾಕಿಂಗ್‌ ದಂದೆಯಲ್ಲಿ ಭಾಗಿದ್ದಾರೆ ಎಂದು ಆರೋಪಿಸಿದ್ದರು. ಇದರಿಂದಾಗಿ ಆ ನೌಕರರನ್ನು ಅಮಾನತು ಮಾಡಲಾಗಿತ್ತು.

ಅಮಾನತುಗೊಂಡಿದ್ದ 17 ಮಂದಿ ಸಿಬ್ಬಂದಿಗಳು ಈಗ ಆರೋಪಮುಕ್ತರಾಗಿದ್ದಾರೆ. ಆದರೆ, ಅವರಿಗೆ ಇನ್ನೂ ಕರ್ತವ್ಯಕ್ಕೆ ಹಾಜರಾಗಲು, ಅವರ ಅಮಾನತನ್ನ ರದ್ದುಗೊಳಿಸಿ ಆದೇಶ ನೀಡಲಾಗಿಲ್ಲ. 17 ನೌಕರರ ಪೈಕಿ 5 ಮಂದಿ ಆರೋಪದ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತರಾಗಿ ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ. ಉಳಿದ 12 ಮಂದಿ ಕರ್ತವ್ಯಕ್ಕೆ ಹಾಜರಾಗಲು ಉತ್ಸುಕರಾಗಿದ್ದರೂ ಕ್ರಿಸ್ಟೆಲ್ ಇನ್ಫೋಟೆಕ್ ಸಂಸ್ಥೆಯ ಮುಖ್ಯಸ್ಥರು ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ 12 ಮಂದಿ ಕೆಲಸವಿಲ್ಲದೆ, ಲಾಕ್‍ಡೌನ್ ವೇಳೆ ಹೊಸ ಕೆಲಸದ ಹುಡುಕಾಟದಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಲದೆ, 17 ಮಂದಿ ಸಿಬ್ಬಂದಿಗೆ ಹಿಂದಿನ ತಿಂಗಳ ವೇತನವನ್ನು ಸಹ ನೀಡಿಲ್ಲ. ಹೀಗಾಗಿ ಅವರ ದೈನಂದಿನ ಬದುಕು ದುಸ್ಥರವಾಗಿದೆ ಎಂದು ನೌಕರರು ಹೇಳಿಕೊಂಡಿದ್ದಾರೆ.

`ನಾವು ಮುಸ್ಲಿಮ್ ಆಗಿ ಹುಟ್ಟಿದ್ದೇ ತಪ್ಪಾಗಿದೆ. ನಮ್ಮ ವಿರುದ್ಧ ಬಿಜೆಪಿಯ ಸಂಸದರು ಹಾಗೂ ಶಾಸಕರು ಆರೋಪ ಮಾಡಿದ ಬಳಿಕ ನಮ್ಮ ಉದ್ಯೋಗ ಹೋಯಿತು. ಪೊಲೀಸರ ತನಿಖೆಯಲ್ಲಿ ನಾವು ಆರೋಪ ಮುಕ್ತರಾದಾಗ ಮರಳಿ ಕೆಲಸಕ್ಕೆ ತೆಗೆದುಕೊಳ್ಳುವ ಭರವಸೆ ಇತ್ತು. ಆದರೆ, ಈವರೆಗೂ ನಮಗೆ ಕೆಲಸಕ್ಕೆ ಕರೆ ಬಂದಿಲ್ಲ’ ಎಂದು ನೌಕರರೊಬ್ಬರು ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ.

ಕೋವಿಡ್ ಸಂಕಷ್ಟದ ಸಮಯದಲ್ಲಿ ರೋಗಿಗಳ ಸೇವೆ ಎಂದು ಭಾವಿಸಿ ನಾವು ನಿಸ್ವಾರ್ಥದಿಂದ ಕೆಲಸ ಮಾಡುತ್ತಿದ್ದೇವು. ನಮಗೆ ಕ್ರಿಸ್ಟೆಲ್ ಇನ್ಫೋಟೆಕ್ ಸಂಸ್ಥೆ ಕೊಡುತ್ತಿದ್ದ 13 ಸಾವಿರ ರೂ. ಸಂಬಳ ಯಾವುದಕ್ಕೂ ಸಾಲುತ್ತಿರಲಿಲ್ಲ. ನಮಗೆ ಕೆಲಸದ ತೃಪ್ತಿ ಇತ್ತು. ನಮ್ಮ ವಿರುದ್ಧ ಆರೋಪ ಬಂದ ಬಳಿಕ ಮಾನಸಿಕವಾಗಿ ನಾವು ಸಂಪೂರ್ಣ ಕುಗ್ಗಿದ್ದೇವೆ. ಆದರೂ, ಕೌಟುಂಬ ನಿರ್ವಹಣೆ ಜವಾಬ್ದಾರಿ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಮರಳಲು ನಾವು 12 ಮಂದಿ ಪತ್ರವನ್ನು ಕೊಟ್ಟಿದ್ದೆವು. ಸಂಸ್ಥೆ ಕಡೆಯಿಂದ ಈವರೆಗೂ ಕೆಲಸಕ್ಕೆ ಬರಲು ಸ್ಪಂದಿಸುತ್ತಿಲ್ಲ. ಹೀಗಾಗಿ ನಾನು ಹೊಸ ಕೆಲಸದ ಹುಡುಕಾಟದಲ್ಲಿದ್ದೇನೆ ಎಂದು ಅವರು ಹೇಳಿದ್ದಾರೆ.

ಮೇ 4ರಂದು ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿ ಹಾಗೂ ಉದಯ್ ಗರುಡಾಚಾರ್ ನೇತೃತ್ವದ ತಂಡ ‘ಬೆಡ್ ಬ್ಲಾಕಿಂಗ್’ ಪ್ರಕರಣ ಸಂಬಂಧ 17 ಮಂದಿ ಸಿಬ್ಬಂದಿಯ ವಿರುದ್ಧ ಆರೋಪ ಮಾಡಿದ್ದರು.

ಇದನ್ನೂ ಓದಿ: ಕೇರಳ ವಿಧಾನಸಭೆ: ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights