ಜೇನಿನ ಗೀಳನ್ನ ಉದ್ಯಮ ಆರಂಭಿಸಲು ಸ್ಪೂರ್ತಿಯಾಗಿಸಿಕೊಂಡ ಯುವ ಉದ್ಯಮಿ ದಿನೇಶ್ ನಾರ್ಕೋಡು….!

ಬದುಕು ನಿರ್ಧರಿಸೋ, ಬದಲಾಯಿಸೋ ತಾಕತ್ತಿರೋ ಟರ್ನಿಂಗ್ ಪಾಯಿಂಟ್ ಅಂದ್ರೆ ಅದು ಹದಿಹರೆಯ. ಈ ಸಮಯದಲ್ಲಿ ಹುಟ್ಟಿಕೊಂಡ ಗೀಳು ಚಟ್ಟ ಹತ್ತೋವರೆಗೂ ಬಿಡಲ್ಲ ಅನ್ನೋದು ಅಷ್ಟೇ ಸತ್ಯ. ಹಾಗಂತ ಇದನ್ನ ಕೆಟ್ಟದಕ್ಕೇ ಬಳಸಿಕೊಳ್ಳಬೇಕೆಂದೇನಿಲ್ಲ. ಸತ್ ಕರ್ಮದ ಫಲ ಸದಾ ಒಳ್ಳೆಯದೇ ಆಗಿರುತ್ತಲ್ವ. ರಜಾ ದಿನಗಳಲ್ಲಿ ಓರಗೆಯ ಹುಡುಗರು ಕ್ರಿಕೆಟ್, ಲಗೋರಿ, ಮರಕೋತಿ ಆಟ ಅಂತ ಟೈಮ್ ಪಾಸ್ ಮಾಡ್ತಿದ್ರೆ ಈತ ಮಾತ್ರ ಕಾಡಿನಲ್ಲಿ ಜೇನು ನೊಣಗಳ ಗೂಡಿನ ಹುಡುಕಾಟದಲ್ಲಿ ತೊಡಗಿರುತ್ತಿದ್ದ. ಹೈಸ್ಕೂಲ್ ಓದುತ್ತಿರುವಾಗಲೇ ಜೇನು ನೊಣಗಳನ್ನು ಸಾಕಲು ಪೆಟ್ಟಿಗೆಗೆ ತುಂಬಿಸುವ, ಜೇನು ತೆಗೆಯುವ ವಿದ್ಯೆಯನ್ನು ಕರಗತ ಮಾಡಿಕೊಳ್ಳುವ ಹುಮ್ಮಸ್ಸು ಆತನದು. ಹಾಗಂತ ಓದೋದರಲ್ಲೇನು ಹಿಂದೆ ಉಳಿದಿರಲಿಲ್ಲ. ತರಗತಿಯಲ್ಲಿ ಮುಂದಿನ ಸ್ಥಾನ ಸದಾ ಆತನಿಗೇ ಮೀಸಲು. ಹೀಗೆ ಜೇನಿನ ಗೀಳನ್ನ ಉದ್ಯಮ ಆರಂಭಿಸಲು ಸ್ಪೂರ್ತಿಯಾಗಿ ಬಳಸಿಕೊಂಡವರು ಯುವ ಉದ್ಯಮಿ ದಿನೇಶ್ ನಾರ್ಕೋಡು.

ಜೇನು ಪೆಟ್ಟಿಗೆ

 

ಸುಳ್ಯ ತಾಲೂಕಿನ ಮರ್ಕಂಜ ಆಗಿನ ಕಾಲಕ್ಕೆ ಪಶ್ಚಿಮ ಘಟ್ಟದ ದಟ್ಟ ಕಾಡಿನಿಂದ ಸುತ್ತುವರಿದಿದ್ದ ಪುಟ್ಟ ಹಳ್ಳಿ. ಆ ಹಳ್ಳಿಗಳು ನೆಚ್ಚಿಕೊಂಡಿದ್ದು ಕೃಷಿಯನ್ನು. ಭತ್ತದ ಗದ್ದೆಗಳು, ಅಡಿಕೆ, ತೆಂಗು, ಬಾಳೆ, ಕಾಳುಮೆಣಸು, ರಬ್ಬರ್ ಹೀಗೆ ಸಮೃದ್ಧ ಬೆಳೆಗಳು. ಜೊತೆ ಜೊತೆಗೆ ಕೃಷಿಕರು ನಾಲ್ಕೋ, ಐದೋ, ಗರಿಷ್ಟ ಹತ್ತು ಜೇನು ಪೆಟ್ಟಿಗೆಗಳನ್ನು ತೋಟದಲ್ಲಿ ಇಟ್ಟುಕೊಳ್ಳುತ್ತಿದ್ದರು. ತಮ್ಮ ಉಪಯೋಗಕ್ಕೆ ಉಳಿಸಿಕೊಂಡು ಮಿಕ್ಕಿದನ್ನು ಜೇನು ಸೊಸೈಟಿಗೆ ಮಾರಾಟ ಮಾಡುತ್ತಿದ್ದರು. ಜೇನು ನೊಣಗಳಿಂದ ಕೃಷಿ ಇಳುವರಿ ಹೆಚ್ಚುತ್ತದೆ ಅನ್ನೋ ಸತ್ಯವನ್ನು ಕೆಲವರು ತಿಳಿದುಕೊಂಡಿದ್ದರು. ಹೀಗೆ ತಮ್ಮ ತೋಟದಲ್ಲಿ ತಮ್ಮ ಬಳಕೆಗೆ ಬೇಕಾದಷ್ಟು ಜೇನು ಪೆಟ್ಟಿಗೆಯನ್ನು ತಂದೆಯವರು ಇಟ್ಟುಕೊಂಡಿದ್ದರು. ಇದನ್ನು ಸದುಪಯೋಗಪಡಿಸಿಕೊಂಡವರು ದಿನೇಶ್. ತೋಟದಲ್ಲಿಟ್ಟಿದ್ದ ಪೆಟ್ಟಿಗೆಗಳಿಗೆ ಜೇನು ನೊಣ ತುಂಬಿಸುವ, ಜೇನು ತುಪ್ಪ ತೆಗೆಯುವ ಕೆಲಸ ಮಾಡುತ್ತಿದ್ದವರು ತೋಟದ ಕೆಲಸಕ್ಕೆ ಬರುತ್ತಿದ್ದ ಒಬ್ಬ ಆಳು. ಇವರಿಗೆ ಸಹಾಯಕರಾಗಿ ದಿನೇಶ್ ಕೂಡ ಜೇನು ಗೂಡು ಹುಡುಕೋ ಕಾರ್ಯದಲ್ಲಿ ಕಾಡನ್ನು ಸುತ್ತುತ್ತಿದ್ದರು. ಅದೆಷ್ಟೋ ಬಾರಿ ರೊಚ್ಚಿಗೆದ್ದ ಜೇನು ನೊಣಗಳಿಂದ ತಾರಾಮಾರ ಕಚ್ಚಿಸಿಕೊಂಡರೂ ಹಿಂದೆ ಸರಿಯದೆ ಜೇನು ಕೃಷಿ ವಿದ್ಯೆಯನ್ನು  ಕಲಿತೇ ಕಲಿಯುತ್ತೇನೆಂದು ಪಟ್ಟು ಹಿಡಿದರು. ಕಾಲಕ್ರಮೇಣ ತಾನೇ ಸ್ವತಃ ಜೇನನ್ನು ಪೆಟ್ಟಿಗೆಯಲ್ಲಿ ಕೂಡಿಸೋದರಲ್ಲಿ ಯಶಸ್ವಿ ಕೂಡ ಆದರು. ಇವರ ಈ ಕಾರ್ಯಕ್ಕೆ ಸಾಥ್ ನೀಡಿದ್ದು ಇವರ ಅಮ್ಮ.

ದಿನೇಶ್ ನಾರ್ಕೋಡು. ಉದ್ಯಮಿ

ಆದರೆ ಕಾಲ ಕಳೆದಂತೆ ವಿದ್ಯೆ ಕಲಿಯೋ ಉದ್ದೇಶದಿಂದ ಹಳ್ಳಿಯನ್ನು ಬಿಟ್ಟು ನಗರ ಸೇರಿದರು.  ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿ ಕ್ವಾಲಿಟಿ ಇಂಜಿನಿಯರ್ ಆಗಿ ಬೆಂಗಳೂರಿನ ಪ್ರತಿಷ್ಟಿತ ಕಂಪೆನಿಯೊಂದರಲ್ಲಿ ಹತ್ತು ವರುಷಗಳ ಕಾಲ ಕಾರ್ಯನಿರ್ವಹಿಸಿದರು. ಯಾವಗಲೊಮ್ಮೆ ರಜೆಯಲ್ಲಿ ಊರಿಗೆ ಬಂದಾಗ ಜೇನು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಉಳಿದ ಸಮಯದಲ್ಲಿ ಅಮ್ಮನೇ ಎಲ್ಲಾ ಜೇನು ಪೆಟ್ಟಿಗೆಗಳನ್ನು ನೋಡಿಕೊಳ್ಳುತ್ತಿದ್ದರು. ನಂತರ ವೆಬ್ ಡಿಸೈನ್ ಬಗ್ಗೆ ಕಲಿತು ಖ್ಯಾತ ಎಂಎನ್‍ಸಿಯಲ್ಲಿ ಕೆಲಸಕ್ಕೆ ಸೇರಿದರು. ಎಲ್ಲಿದ್ದರೂ ಒಲುಮೆ ಮಾತ್ರ ಕೃಷಿಯ ಕಡೆಗೇ ಇತ್ತು. ಅದರಲ್ಲೂ ಊರಿಗೆ ಬಂದಾಗ ಜೇನು ಕೃಷಿ ಬಗೆಗಿನ ಪ್ರೀತಿ ಬಿಡದೆ ಕಾಡುತಿತ್ತು. ಇಂತಹ ಸಂಧರ್ಭದಲ್ಲಿ ಪೂರ್ಣ ಪ್ರಮಾಣದ ಜೇನು ಕೃಷಿ ಜೊತೆಗೆ ಜೇನು ತುಪ್ಪದ ಉದ್ಯಮವನ್ನು ಅರಂಭಿಸಲು ನಿರ್ಧರಿಸಿದ್ದರು. ತಾಯಿ, ತಂದೆ, ಪತ್ನಿ, ಅಣ್ಣಂದಿರ ತುಂಬು ಮನಸ್ಸಿನ ಪ್ರೋತ್ಸಾಹವೂ ಜೊತೆಗಿತ್ತು. ಅಷ್ಟೇ ಅಲ್ಲದೆ ಸಾಫ್ಟ್ ವೇರ್ ಉದ್ಯೋಗದಲ್ಲಿದ್ದ ಅಣ್ಣ ಪ್ರಕಾಶ್ ನಾರ್ಕೋಡು ತಾನು ಕೂಡ ಬಂಡವಾಳ ತೊಡಗಿಸುತ್ತೇನೆ ನೀನು ಉದ್ಯಮ ಆರಂಭಿಸು ಅಂದಿದ್ದು ಆನೆಬಲ ಬಂದಂತಾಗಿತ್ತು.

ಅಣ್ಣನ ಸಹಕಾರದೊಂದಿಗೆ ಪೂರ್ಣ ದೇಶೀ ಹಾಗೂ ನೈಸರ್ಗಿಕ ಉತ್ಪನ್ನಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ “ನಾರ್ಕೋಡು ನ್ಯಾಚುರಲ್ಸ್ ಹನಿ ಆಂಡ್ ಸ್ಪೈಸಸ್ ಕಂಪೆನಿ”ಯನ್ನು ಆರಂಭಿಸಿದರು. ಈ ಕಂಪೆನಿಯಿಂದ “ಶ್ರೀಮಧು” ಬ್ರಾಂಡ್‍ನ ಜೇನು ತುಪ್ಪವನ್ನು ಪರಿಚಯಿಸಿದ್ದಾರೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬಾಯಿಂದ ಬಾಯಿಗೆ ಹರಡಿ ಅದೆಷ್ಟೋ ಗ್ರಾಹಕರನ್ನು  ತಲುಪಿದೆ. ಒಮ್ಮೆ ಬಳಸಿದವರು ಖಾಯಂ ಗ್ರಾಹಕರಾಗಿ ಬಿಟ್ಟಿದ್ದಾರೆ. ಅದರಲ್ಲೂ ಐಟಿ ಕ್ಷೇತ್ರದಲ್ಲಿ “ನಾರ್ಕೋಡು ನ್ಯಾಚುರಲ್ಸ್”ನ “ಶ್ರೀಮಧು” ಜೇನು ತುಪ್ಪ ತುಂಬಾ ಪರಿಚಿತ. ಊರಿಗೆ ಬಂದವರು ನೀರಿಗೆ ಬರಲೇ ಬೇಕು ಅನ್ನೋ ಹಾಗೆ ಇಂದು ಉದ್ಯಮ ಕ್ಷೇತ್ರಕ್ಕೆ ಪ್ರವೇಶಿಸಿದವರು ಆನ್‍ಲೈನ್ ಮಾರ್ಕೆಟನ್ನು ಹೊಂದಲೇ ಬೇಕು. ಅತ್ಯಂತ ಹೆಚ್ಚು ಗ್ರಾಹಕರಿಗೆ ಶೀಘ್ರವಾಗಿ ವಸ್ತುವನ್ನು ತಲುಪಿಸುವ ಉದ್ದೇಶದಿಂದ www.narkodunaturals.com ಅನ್ನುವ ವೆಬ್‍ಸೈಟ್‍ನ್ನು ಹೊಂದಿರುತ್ತಾರೆ. ಈ ವೆಬ್‍ಸೈಟ್ ಮೂಲಕ ಗ್ರಾಹಕರು ಜೇನುತುಪ್ಪ ಮತ್ತು ಇತರೆ ಕೃಷಿ ಆಧಾರಿತ ನೈಸರ್ಗಿಕ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆಯಬಹುದು. ಉತ್ಪನ್ನಗಳನ್ನು ಆನ್‍ಲೈನ್‍ನಲ್ಲಿ ಖರೀದಿಸಲು ಬಯಸುವವರಿಗೆ ಇ-ಕಾರ್ಟ್ ಸೌಲಭ್ಯ ಸದ್ಯದಲ್ಲೇ ಲಭ್ಯ.

ಪಶ್ಚಿಮ ಘಟ್ಟ

ಈಗ ಸುಮಾರು ನಲ್ವತ್ತರಿಂದ ಐವತ್ತು “ಎಪಿಸೆರಾ ಇಂಡಿಕಾ” ದೇಶಿ ತಳಿಯ ಜೇನು ಕುಟುಂಬವನ್ನು ಹೊಂದಿರುವ ದಿನೇಶ್‍ರವರಿಗೆ ಐನೂರು ಪೆಟ್ಟಿಗೆಯವರೆಗೆ ವಿಸ್ತರಿಸುವ ಕನಸಿದೆ.

ಜೇನು ಪೆಟ್ಟಿಗೆಯನ್ನು ಸ್ವತಃ ಸಿದ್ದಪಡಿಸುವ ಇವರು ಆಸಕ್ತರಿಗೆ ಪೆಟ್ಟಿಗೆಯಲ್ಲಿ ಜೇನು ಕುಟುಂಬವನ್ನು ತುಂಬಿಸಿ ಮಾರಾಟವನ್ನೂ ಮಾಡುತ್ತಾರೆ. ಬೆಂಗಳೂರಿನಲ್ಲಿ ಮನೆಯ ತಾರಸಿ ಮೇಲೆ ಕೂಡ ಜೇನು ಸಾಕಾಣಿಕೆಯನ್ನು ಮಾಡುತ್ತಿದ್ದಾರೆ. ಇನ್ನು ನಗರದಲ್ಲಿ ತಾರಸಿ ಮೇಲೆ ಅಥವಾ ಖಾಲಿ ಸೈಟ್‍ಗಳಲ್ಲಿ ಜೇನುಕೃಷಿ ಮಾಡಲು ಬಯಸುವವರಿಗೆ ತರಬೇತಿ ನೀಡಲು ಸಿದ್ಧರಿದ್ದಾರೆ.

ಜೇನುಕೃಷಿಯ ಬಗ್ಗೆ ಸುಮಾರು ಇಪ್ಪತ್ತು ವರ್ಷಗಳ ಅನುಭವ ಹೊಂದಿರುವ ಇವರ ಪ್ರಕಾರ ಜೇನು ನೊಣಗಳನ್ನು ಸಾಕಲು ಬೇಕಾಗಿರುವುದು ತಾಳ್ಮೆ ಮತ್ತು ಏಕಾಗ್ರತೆ. ಜೇನು ನೊಣಗಳನ್ನು ಪೆಟ್ಟಿಗೆಗೆ ತುಂಬಿಸುವ ಹಾಗೂ ಜೇನು ತುಪ್ಪ ತೆಗೆಯುವಾಗ ನೊಣಗಳಿಗೆ ನೋವಾಗದಂತೆ ಜಾಗೃತೆ ವಹಿಸಬೇಕಾಗುತ್ತದೆ. ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ನೊಣಗಳ ದಾಳಿಗೆ ತುತ್ತಾಗಬೇಕಾಗುತ್ತದೆ. ಮುಖ್ಯವಾಗಿ ಒಂದೂ ನೊಣವೂ ಸಾಯಬಾರದು. ಎಲ್ಲಕ್ಕಿಂತ ಮುಖ್ಯವಾಗಿ ರಾಣಿ ಜೇನು ವಲಸೆ ಹೋಗದಂತೆ ತಡೆಯುವುದು. ರಾಣಿ ಜೇನನ್ನು ಉಳಿದ ನೊಣಗಳು ಹಿಂಬಾಲಿಸುತ್ತವೆ. ಇಲ್ಲವಾದಲ್ಲಿ ಪೆಟ್ಟಿಗೆ ಖಾಲಿಯಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಜೇನು ತುಪ್ಪದ ಕೊಯಿಲು ಜನವರಿಯಿಂದ ಮೇ ಕೊನೆಯವರೆಗೆ ತಿಂಗಳಿಗೆ ಎರಡು ಅಥವಾ ಮೂರು ಬಾರಿ. ಜೂನ್‍ನಿಂದ ಅಕ್ಟೋಬರ್‍ವರೆಗೆ ಜೇನುತುಪ್ಪದ ಉತ್ಪಾದನೆ ಇರುವುದಿಲ್ಲ. ಬದಲಾಗಿ ಎಂಟು ದಿನಗಳಿಗೊಮ್ಮೆ ಕೃತಕ ಆಹಾರ ನೀಡುತ್ತಿರಬೇಕು ಮತ್ತು ಹತ್ತು ದಿನಗಳಿಗೊಮ್ಮೆ ಪೆಟ್ಟಿಗೆಯನ್ನು ಹುಳ, ಹುಪ್ಪಡಿಗಳು ಪ್ರವೇಶಿಸದಂತೆ ನೋಡಿಕೊಳ್ಳಬೇಕಾಗುತ್ತದೆ. ಜೊತೆಗೆ ಪೆಟ್ಟಿಗೆಯ ಸುತ್ತಮುತ್ತ ಕಣಜದ ಹುಳುಗಳು ಇದ್ದಲ್ಲಿ ಜೇನು ನೊಣಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಕಣಜದ ಗೂಡನ್ನು ನಾಶ ಮಾಡುತ್ತಿರಬೇಕು.

 

ಪುಟ್ಟ ಮಗುವಿನಿಂದ ವೃದ್ಧರವರೆಗೆ ಪ್ರತಿಯೊಬ್ಬರ ಆರೋಗ್ಯಕ್ಕೂ ಜೇನು ತುಪ್ಪದ ಬಳಕೆ ಅನನ್ಯ. ಕ್ಯಾಲ್ಸಿಯಂ ಕೊರತೆ, ಅನಿಮಿಯಾದಂತಹ ತೊಂದರೆಗೆ ಜೇನಿನ ಬಳಕೆ ರಾಮಭಾಣ. ಶೀತ, ನೆಗಡಿ, ಕೆಮ್ಮಿಗಂತೂ ಜೇನು ತುಪ್ಪಕ್ಕಿಂತ ಸಿದ್ಧೌಷದ ಬೇರೊಂದಿಲ್ಲ. ದೇಹದಲ್ಲಿನ ಅನಾವಶ್ಯಕ ಕೊಬ್ಬನ್ನು ಕರಗಿಸಿ ರಕ್ತವನ್ನು ಶುದ್ಧಿ ಗೊಳಿಸುತ್ತದೆ. ಹೀಗೆ ಜೇನಿನ ಉಪಯೋಗ ಒಂದೆರಡಲ್ಲ. ಆಹಾರ ಹಾಗೂ ಔಷಧಿಯಾಗಿ ನಮ್ಮ ದಿನನಿತ್ಯದ ಜೀವನದಲ್ಲಿ ಇದನ್ನು ಬಳಸಿಕೊಳ್ಳಬಹುದು. ಹಿಂದೆಲ್ಲ ಆದಿವಾಸಿಗಳು ಗೆಡ್ಡೆ ಗೆಣಸು, ಆಹಾರ ಸಿಗದಿದ್ದಾಗ ತಿಂಗಳುಗಟ್ಟಲೆ ಬರಿ ಜೇನುತುಪ್ಪವನ್ನಷ್ಟೇ ಸೇವಿಸಿ ಬದುಕುತ್ತಿದ್ದರು.  ಇವತ್ತು ನಾವು ತಿನ್ನೋ ಆಹಾರವೇ ವಿಷವಾಗಿರುವಂತಹ ಸಂಧರ್ಭದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಶುದ್ದ ಜೇನು ಅತ್ಯಂತ ಸಹಕಾರಿ. ಅದರಲ್ಲೂ ಬಹಳಷ್ಟು ಕಲಬರಕೆಗಳು ಬಂದಿವೆ. ಇಂತಹ ಸಂಧರ್ಭದಲ್ಲಿ ಒಬ್ಬ ಕೃಷಿ  ಹಿನ್ನಲೆಯುಳ್ಳ ವಿದ್ಯಾವಂತ ವ್ಯಕ್ತಿ ಸ್ವಂತ ಪರಿಶ್ರಮದಿಂದ ಸ್ವತಹ ಜೇನನ್ನು ಸಾಕಿ ಅದರ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುವುದು ಸ್ವಾಗತಾರ್ಹ ಜೊತೆಗೆ ನಂಬಲಾರ್ಹ. ಇಂಥವರಿಗೆ ಪ್ರೋತ್ಸಾಹ ನೀಡಿದಾಗಲೇ ದೇಶದ ಬೆನ್ನೆಲುಬಾಗಿರುವ ಕೃಷಿಯ ಉನ್ನತಿ ಜೊತೆಗೆ ದೇಶದ ಅಭಿವೃದ್ಧಿ ಸಾಧ್ಯ.

ಜೇನು ತುಪ್ಪ, ಕಾಳುಮೆಣಸು ಹಾಗೂ ಗೋಡಂಬಿ ಬೇಕಿದ್ದಲ್ಲಿ ಈ ವಾಟ್ಸಪ್ ಸಂಖ್ಯೆಗೆ ಸಂದೇಶ ಕಳುಹಿಸಿ: 8762752938 (ನಾರ್ಕೋಡು ನ್ಯಾಚುರಲ್ಸ್)

 

 

One thought on “ಜೇನಿನ ಗೀಳನ್ನ ಉದ್ಯಮ ಆರಂಭಿಸಲು ಸ್ಪೂರ್ತಿಯಾಗಿಸಿಕೊಂಡ ಯುವ ಉದ್ಯಮಿ ದಿನೇಶ್ ನಾರ್ಕೋಡು….!

  • October 25, 2017 at 9:51 AM
    Permalink

    I was recommended this web site by my cousin. I’m not sure whether this post is written by him as no one else know such detailed about my trouble. You are amazing! Thanks!

Comments are closed.

Social Media Auto Publish Powered By : XYZScripts.com