ಶಾಸಕ ಬಾವಾರಿಂದ ಅಧಿಕಾರಿಗೆ ಅವಾಜ್! ವೀಡಿಯೋ ನೋಡಿ…

ಕೆಐಎಡಿಬಿ ಅಧಿಕಾರಿಯೊಬ್ಬರನ್ನ ತರಾಟೆಗೆ ತೆಗೆದುಕೊಳ್ಳೋ ಭರದಲ್ಲಿ ಮಂಗಳೂರು ಉತ್ತರ ಶಾಸಕ ಮೊಯ್ದೀನ್ ಬಾವಾ, ಏಕವಚನ ಪ್ರಯೋಗಿಸಿ ಅನುಚಿತವಾಗಿ ವರ್ತಿಸಿದ ವೀಡಿಯೋ ವೊಂದು ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದ ರಸ್ತೆ ದುರಸ್ತಿ ವಿಚಾರವಾಗಿ ಅಧಿಕಾರಿ ಪ್ರಕಾಶ್ ಎಂಬುವವರನ್ನು ಬಾವಾ ತರಾಟೆಗೆ ತೆಗೆದುಕೊಂಡಿದ್ದು, ಈ ವೇಳೆ ಏಕವಚನ ಪ್ರಯೋಗಿಸಿ ಅನುಚಿತ ವರ್ತನೆ ತೋರಿರೋದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ಇದನ್ನು ಕೆಲವರು ಕೊಂಡಾಡಿದರೆ, ಕೆಲವರು ಶಾಸಕರೊಬ್ಬರ ಈ ರೀತಿಯ ವರ್ತನೆ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಶಾಸಕ ಬಾವಾ ಕೆಐಎಡಿಬಿ ಕಚೇರಿಗೆ ತೆರಳಿ ಅಧಿಕಾರಿ ಪ್ರಕಾಶ್ ರನ್ನ ತರಾಟೆಗೆ ತಗೆದುಕೊಳ್ಳೋ ದೃಶ್ಯವಿದೆ. ಈ ವೇಳೆ ಬಾವಾ ಸುತ್ತ ಬೆಂಬಲಿಗರು ಕೂಡ ಇದ್ದು, ಅವರ ಮುಂದೆಯೇ ಅಧಿಕಾರಿಯನ್ನು ಏಕವಚನದಲ್ಲಿ ಸಂಭೋಧಿಸಿ ಕೂತವರನ್ನ ಎಬ್ಬಿಸಿ ಚೆನ್ನಾಗಿಯೇ ಕ್ಲಾಸ್ ತೆಗೆದುಕೊಂಡಿರೋದು ಕಂಡು ಬಂದಿದೆ. ಆದರೆ ಇದೀಗ ಈ ವಿಡಿಯೋ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

ಅಸಲಿಗೆ ಈ ಘಟನೆ ಕಳೆದ ಸೋಮವಾರ ನಡೆದಿದ್ದು, ಬೈಕಂಪಾಡಿ ರಸ್ತೆ ಅವ್ಯವಸ್ಥೆ ಖಂಡಿಸಿ ನಾಗರಿಕರು ಕೆಐಎಡಿಬಿ ಕಚೇರಿಗೆ ಮುತ್ತಿಗೆ ಹಾಕಿದ್ದರು ಈ ವೇಳೆ ಅಧಿಕಾರಿ ಪ್ರಕಾಶ್ ಅಲ್ಲಿಂದ ಕಾಲ್ಕಿತ್ತಿದ್ದರು. ಈ ವೇಳೆ ತನ್ನ ಬೆಂಬಲಿಗರು ಜೊತೆ ಅಲ್ಲಿಗೆ ಆಗಮಿಸಿ ಶಾಸಕ ಬಾವಾ ಕಚೇರಿಗೆ ಅಧಿಕಾರಿಯನ್ನು ಕರೆಸಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳುವ ದೃಶ್ಯಗಳು ಕೂಡ ವೈರಲ್ ಆಗಿದೆ. ಆದರೆ ಅದಕ್ಕೆ ಅವಕಾಶ ಕೊಡದ ಬಾವಾ ತಮ್ಮದೇ ಶೈಲಿಯಲ್ಲಿ ಅಧಿಕಾರಿಗೆ ಚಾರ್ಜ್ ಮಾಡಿದ್ದಾರೆ.

ಹೀಗಾಗಿ ಬಾಬಾ ತರಾಟೆಯನ್ನ ನೋಡಿ ಜನ ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ. ಆದರೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳುವ ಭರದಲ್ಲಿ ಬಾವಾ ವರ್ತಿಸಿರೋದು ಸರಿಯಲ್ಲ ಅನ್ನೋ ಮಾತುಗಳು ಕೇಳಿ ಬಂದಿದೆ. ಈ ಮಧ್ಯೆ ಇಂತಹ ದಪ್ಪ ಚರ್ಮದ ಅಧಿಕಾರಿಗಳಿಗೆ ಇದೇ ರೀತಿ ಕ್ಲಾಸ್ ತೆಗೆದುಕೊಳ್ಳಬೇಕು ಅನ್ನೋ ಅಭಿಪ್ರಾಯವೂ ಕೇಳಿ ಬಂದಿದೆ. ಏನೇ ಆದರೂ ಒಬ್ಬ ಸರ್ಕಾರಿ ಅಧಿಕಾರಿಯನ್ನು ಇಷ್ಟು ಕೀಳಾಗಿ ನಡೆದುಕೊಂಡಿರೋದು ಸರಿಯಲ್ಲ ಅನ್ನೋ ಮಾತು ಕೇಳಿ ಬಂದಿದೆ.

Comments are closed.

Social Media Auto Publish Powered By : XYZScripts.com